ಜಿಲಾಟಿನ್ -
	ಚರ್ಮ, ಮೃದ್ವಸ್ಥಿ, ಮೂಳೆ ಇತ್ಯಾದಿಗಳನ್ನು ನೀರಿನಲ್ಲಿ ಕುದಿಸಿದಾಗ ಕೊಲ್ಲಾಜಿನ್ನಿನಿಂದ ದೊರೆಯುವ ಪ್ರೋಟೀನ್. ಇದಕ್ಕೂ ಗ್ಲೂ ಎಂಬ ಹೆಸರಿನ ಅಂಟುಪದಾರ್ಥಕ್ಕೂ ವ್ಯತ್ಯಾಸವಿಲ್ಲದಿದ್ದರೂ ಮೂಲವಸ್ತುಗಳನ್ನು ಎಚ್ಚರಿಕೆಯಿಂದ ಆಯ್ದು ಸ್ವಚ್ಛಮಾಡಿ ಜಾಗರೂಕತೆಯಿಂದ ಸಂಸ್ಕರಿಸಿದಾಗ ಗ್ಲೂಗಿಂತ ಸ್ವಚ್ಛ ಮತ್ತು ಶುದ್ಧವಾದ ತೆಳುಬಣ್ಣದ ಫಲಿತ ಜಿಲಾಟಿನ್ ದೊರೆಯುತ್ತದೆ. ಎರಡು ಬಗೆಯ ಜಿಲಾಟಿನ್ನುಗಳುಂಟು. ಮೂಲಕಚ್ಚಾವಸ್ತುಗಳನ್ನು ಆಮ್ಲದಿಂದ ಸಂಸ್ಕರಿಸಿದಾಗ ಂ ಬಗೆಯ ಜಿಲಾಟಿನ್ನೂ ಪ್ರತ್ಯಾಮ್ಲದಿಂದ ಸಂಸ್ಕರಿಸಿದಾಗ ಃ ಬಗೆಯ ಜಿಲಾಟಿನ್ನೂ ದೊರೆಯುತ್ತವೆ. 

	ಜಿಲಾಟಿನ್ ನಿರ್ವರ್ಣವಾದ ಅಥವಾ ನಸುಹಳದಿ ಬಣ್ಣವುಳ್ಳ ಪಾರಕ ವಸ್ತು. ವಾಸನೆಯೇ ಇಲ್ಲವೆನ್ನಬಹುದು. ಇದು ಹಲಗೆಯ ರೂಪದಲ್ಲಿ, ತೆಳು ಸುಳಿಗಳಂತೆ (ಫ್ಲೇಕ್ಸ್ ), ತುರಿಯಂತೆ (ಶ್ರೆಡ್ಸ್ ), ಗುಳಿಗೆಯ ರೂಪದಲ್ಲಿ ಹಾಗೂ ನಯವಾದ ಹುಡಿಯಂತೆ ದೊರೆಯುತ್ತದೆ. ನೀರಿಗೆ ಬೆರೆಸಿದಾಗ ಉಬ್ಬಿ ತನ್ನ ತೂಕದ 5-10ರಷ್ಟು ನೀರನ್ನು ಹೀರಿಕೊಳ್ಳುತ್ತದೆ. ಇದು ಬಿಸಿ ನೀರು ಮತ್ತು ಅಸೆಟಿಕ್ ಆಮ್ಲದಲ್ಲಿ ವಿಲೀನವಾಗುವ ಪ್ರೋಟೀನ್. ತೆಳುವಾದ ಆಹಾರವಸ್ತುಗಳನ್ನು ಮಂದ ಮಾಡಲು ಜಿಲಾಟಿನ್ನನ್ನು ಉಪಯೋಗಿಸುವುದುಂಟು. ಛಾಯಾಚಿತ್ರ ಫಿಲ್ಮುಗಳ ತಯಾರಿಕೆಯಲ್ಲಿ, ವರ್ಣರಂಜಿತ ಮುದ್ರಣದಲ್ಲಿ, ಪ್ಲಾಸ್ಟಿಕ್ ಸಂಯುಕ್ತಗಳ ತಯಾರಿಕೆಯಲ್ಲಿ, ಬಟ್ಟೆ ಮತ್ತು ಕಾಗದ ಉದ್ಯಮಗಳಲ್ಲಿ ಹೆಚ್ಚಿನ ಪರಿಮಾಣದಲ್ಲಿ ಜಿಲಾಟಿನ್ನಿನ ವಿನಿಯೋಗ ಉಂಟು. ಅಂಟುಗಳಂತೆ, ಸಿಮೆಂಟ್ ವಸ್ತುಗಳಲ್ಲಿ, ಕೃತಕರೇಷ್ಮೆ, ಬೆಂಕಿಕಡ್ಡಿಗಳ ತಯಾರಿಕೆ ಇವೇ ಮುಂತಾದ ಕಡೆ ಕೂಡ ಜಿಲಾಟಿನ್ನಿನ ಉಪಯೋಗವಿದೆ.										(ಎಚ್.ಎಸ್.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ